Total loss of drought and flood in the State is Rs 14,630.85 crore

By the People & For the People
Total loss of drought and flood in the State is Rs 14,630.85 crore

ಒಂದೆಡೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮುಂಗಾರು ವೈಫಲ್ಯ. ಮತ್ತೊಂದೆಡೆ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅಬ್ಬರಿಸಿದ ಪ್ರವಾಹ ಪರಿಸ್ಥಿತಿ. ಅನಾವೃಷ್ಠಿ ಹಾಗೂ ಅತೀವೃಷ್ಠಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾದ ಬೆಳೆ ಮತ್ತು ಆಸ್ತಿ-ಪಾಸ್ತಿಯ ಒಟ್ಟಾರೆ ನಷ್ಟದ ಪ್ರಮಾಣ 14,630.85 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದಿಂದ 3,760.29 ಕೋಟಿ ರೂ ಪರಿಹಾರವನ್ನು ಕೋರಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಕಂದಾಯ ಮತ್ತು ಕೃಷಿ ಸಚಿವರ ನೇತೃತ್ವದ ನಿಯೋಗವು ದೆಹಲಿಗೆ ತೆರಳಿ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಸಂಪುಟ ಸಭೆಯ ಬಳಿಕ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯದ 110 ತಾಲ್ಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿತವಾಗಿವೆ. ಅಲ್ಲದೆ, ಬರದ ಬೇಗೆಯಿಂದ ಬಳಲುತ್ತಿರುವ ಈ ತಾಲ್ಲೂಕುಗಳಲ್ಲಿ 12,145.79 ಕೋಟಿ ರೂ ಬೆಳೆ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳ ಅನ್ವಯ 3,373.85 ಕೋಟಿ ರೂ ಪರಿಹಾರ ಕೋರಲು ತೀರ್ಮಾನಿಸಲಾಗಿದೆ.

ರಾಜ್ಯ ಕಂದಾಯ ಇಲಾಖೆಯು ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಈಗಾಗಲೇ ಮಾಡಿರುವ 201 ಕೋಟಿ ರೂ ವೆಚ್ಚಕ್ಕೆ ಸಚಿವ ಸಂಪುಟವು ಘಟನೋತ್ತರ ಮಂಜೂರಾತಿ ನೀಡಿದೆ. ಕಳೆದ ತಿಂಗಳು ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ 2,485.06 ಕೋಟಿ ರೂ ಬೆಳೆ ಮತ್ತು ಆಸ್ತಿ-ಪಾಸ್ತಿ ಹಾನಿಯಾಗಿದೆ. ಅಂತೆಯೇ, ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಅನ್ವಯ 386.44 ಕೋಟಿ ರೂ ಪರಿಹಾರ ಕೋರಲು ಸಚಿವರ ನಿಯೋಗವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಬರಪೀಡಿತ ಪ್ರದೇಶಗಳಲ್ಲಿ ಗೋ ಶಾಲೆ ಮತ್ತು ಮೇವು ಬ್ಯಾಂಕ್ ಸ್ಥಾಪನೆಗೆ ಹಾಗೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಆಧ್ಯತೆಯ ಮೇರೆಗೆ ನೆರವು ಒದಗಿಸುವಂತೆ ಸಚಿವರ ನಿಯೋಗವು ಭೇಟಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದೆ.

ರಾಜ್ಯದ ಭೂ ಸುಧಾರಣಾ ಕಾಯಿದೆ ಅನ್ವಯ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ರೈತರಿಂದ ನೇರವಾಗಿ ಖರೀದಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಶಿಫಾರಸ್ಸು ಮಾಡುವ ನಿಯಾಮಳಿಗಳನ್ನು ಸರಳೀಕರಣಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆ-1961 ರ 109(ಎ), 79 (ಎ) ಮತ್ತು (ಬಿ), 63 ಹಾಗೂ 80 ಅನ್ವಯ ಕೆಲವು ವಿನಾಯಿತಿಗಳನ್ನು ನೀಡಲು ಸಚಿವ ಸಂಪುಟವು ತೀರ್ಮಾನಿಸಿದೆ.

ನೂತನ ಕಾಯಿದೆಯನ್ವಯ ಸಿಮೆಂಟ್, ಉಕ್ಕು ಹಾಗೂ ವಿದ್ಯುತ್ ಕಾರ್ಖಾನೆಗಳ ಸ್ಥಾಪನೆಗೆ ಜಮೀನು ಮಂಜೂರು ಮಾಡಲು ಸಂಪುಟವು ತನ್ನ ಒಪ್ಪಿಗೆ ನೀಡಿದೆ. ಕಲಬುರಗಿ ಜಿಲ್ಲೆಯ ಸರಡಗಿ ಬಳಿ 179 ಎಕರೆ ಕೃಷಿ ಭೂಮಿಯನ್ನು ಶ್ರೀ ಸಿಮೆಂಟ್ ಕಾರ್ಖಾನೆ, ಕನಕಪುರ ತಾಲ್ಲೂಕಿನ ಕೆಳರಾಡು ಗ್ರಾಮ ಬಳಿ ಶ್ರೀ ಮೂಕಾಂಬಿಕಾ ಇನ್ವೆಂಸ್ಟರ್ ಪ್ರೈವೇಟ್ ಲಿಮಿಟೆಡ್‍ನ ಆರೋಗ್ಯ ಧಾಮಕ್ಕೆ 40.2 ಎಕರೆ, ಸೇಡಂ ತಾಲ್ಲೂಕಿನ ಅರೆ ಬೊಮ್ಮನ ಹಳ್ಳಿ ಬಳಿ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಗೆ 262.13 ಎಕರೆ, ಕೊಪ್ಪಳ ತಾಲ್ಲೂಕಿನ ಗುಡಗೇರಿ ಹೊರೆಬಾಗನಾಡ ಬಳಿ 673.13 ಎಕರೆ ಪ್ರದೇಶದಲ್ಲಿ ಉಕ್ಕು ಮತ್ತು ವಿದ್ಯುತ್ಛಕ್ತಿ ಉತ್ಪಾದನೆ ಮಾಡಲು ಮೆ: ಆಕ್ಸ್ ಸ್ಟೀಲ್ ಕಂಪನಿಗೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬೀದರ್ ಜಿಲ್ಲೆಯ ಹೊನಕೇರಿ ಬಳಿ 70.18 ಎಕರೆ ಭೂಮಿಯನ್ನು ಗುರುಪಾದಪ್ಪ ನಾಗಮಾರಪಲ್ಲಿ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ಸಂಪುಟವು ಸಮ್ಮತಿಸಿದೆ.

ಕಲಬುರಗಿಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತೀ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು 51.53 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆ ನಿಷೇಧದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯ ಅಧಿಕಾರಿಗಳನ್ನು ಅನುಷ್ಠಾನ ಅಧಿಕಾರಿಗಳು ಎಂದು ಸೇರ್ಪಡೆ ಮಾಡಿ ಸರ್ಕಾರದ ಅಧಿಸೂಚನೆ ಹೊರಡಿಸಲು ಸಂಪುಟವು ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ರಾಜ್ಯದ ಹಲವು ನಗರಗಳ ಹೆಸರುಗಳನ್ನು ಬದಲಾಯಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿನ ಪ್ರಕರಣಗಳಲ್ಲಿ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಲು ರಾಜ್ಯ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ರಾಜ್ಯದ ಈ ನಗರಗಳ ಹೆಸರುಗಳನ್ನು ಬದಲಾಯಿಸುವ ವಿಧೇಯಕವನ್ನು ಮಂಡಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಸಬಾ ಹೋಬಳಿ ಕಲ್ಲುಕೋಟೆ ಗ್ರಾಮದಲ್ಲಿ 12.21 ಎಕರೆ ಸರ್ಕಾರಿ ಜಮೀನಿನಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ನಡೆಸುತ್ತಿರುವ 15 ಖಾಸಗಿ ಸಂಘ-ಸಂಸ್ಥೆಗಳ ಗುತ್ತಿಗೆ-ಆಧಾರಿತ ಜಮೀನನ್ನು ಅನುದಾನ-ಆಧಾರಿತ ಜಮೀನು ಎಂದು ಪರಿಗಣಿಸಲು ರಾಜ್ಯ ಸಚಿವ ಸಂಪುಟವು ಮಂಜೂರಾತಿ ನೀಡಿದೆ.

ಅದೇ ರೀತಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿ ಅಣೂರು ಗ್ರಾಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ 2.2 ಎಕರೆ ಜಮೀನು ಮಂಜೂರು ಮಾಡಲು ಸಂಪುಟವು ಒಪ್ಪಿಗೆ ನೀಡಿದೆ.

ಮೈಸೂರಿನಲ್ಲಿ ಡಿಸೆಂಬರ್ 29 ರಿಂದ ಜನವರಿ 4 ರ ವರೆಗೆ ಆಯೋಜಿಸಿರುವ 17 ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಗೆ ಹತ್ತು ಕೋಟಿ ರೂ ಒಂದು ಬಾರಿಯ ಸಹಾಯಾನುದಾನವನ್ನು ನೀಡಲು ಅನುಮೋದನೆ ನೀಡಿದೆ. ಏಳು-ದಿನಗಳ ಈ ಜಾಂಬೂರಿಯನ್ನು ಡಿಸೆಂಬರ್ 29 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉದ್ಘಾಟಿಸಲಿದ್ದಾರೆ ಎಂದು ಜಯಚಂದ್ರ ಅವರು ತಿಳಿಸಿದರು.

ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರೀಕ ಸೇವೆಗಳಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುವ ಕುರಿತಂತೆ ರಾಷ್ಟ್ರೀಯ ಅಂಧರ ಒಕ್ಕೂಟ ಸಂಸ್ಥೆಯ ಬೇಡಿಕೆಗಳನ್ನು ಪರಿಗಣಿಸಿ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯು ನೀಡಿರುವ ಶಿಫಾರಸ್ಸುಗಳಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇನ್ನು ಮುಂದೆ ಅಂಗಲವಿಕಲರು ಎಂಬ ನಾಮಾಂಕಿತ ವ್ಯಕ್ತಿಗಳಿಗೆ ಮೀಸಲಿರಿಸಿರುವ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಲು ಅವಕಾಶವಿರುವುದಿಲ್ಲ. ಅಲ್ಲದೆ, ನೇಮಕಾತಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ನೇಮಕಾತಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಸಂಪುಟವು ಸಮ್ಮತಿಸಿದೆ.

ಚಾಮರಾಜನಗರದ ಹರವೆ ಗ್ರಾಮದಲ್ಲಿ 13.91 ಕೋಟಿ ರೂ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯನ್ನು 200-ಹಾಸಿಗೆಗಳ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ 400-ಹಾಸಿಗೆಗಳ ಉತ್ಕøಷ್ಠತಾ ಆರೋಗ್ಯ ಕೇಂದ್ರ ಸ್ಥಾಪಿಸಲು ದುಬೈ ಮೂಲದ ಬಿ. ಆರ್. ಶೆಟ್ಟಿ ಆರೋಗ್ಯ ಸಂಶೋಧನಾ ಸಂಸ್ಥೆಗೆ ಗುತ್ತಿಗೆ ನೀಡಲು ಸಂಪುಟವು ನಿರ್ಧರಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಕರಡು ಒಪ್ಪಂದ ಮಾಡಿಕೊಳ್ಳಲು ಸಂಪುಟವು ಅನುಮತಿ ನೀಡಿದೆ. ಒಟ್ಟು ವಿಸ್ತೀರ್ಣ 3.88 ಎಕರೆಯ ಈ ಆಸ್ಪತ್ರೆಯ ಕಟ್ಟಡವನ್ನು ನೆಲಸಮಗೊಳಿಸಿ ಆಧುನಿಕ ಆಸ್ಪತ್ರೆಯನ್ನಾಗಿ ರೂಪಿಸಿ ಕಡು ಬಡವರಿಗೆ ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕೆಂಬುದು ಒಪ್ಪಂದದಲ್ಲಿನ ಗಮನಾರ್ಹ ಅಂಶವಾಗಿದೆ ಎಂದು ಟಿ. ಬಿ. ಜಯಚಂದ್ರ ಅವರು ವಿವರಿಸಿದರು.

Leave a Reply